ಮದನಮಸ್ತಿ	-	
	ಅನೊನೇಸೀ ಕುಟುಂಬಕ್ಕೆ  ಸೇರಿದ ಜನಪ್ರಿಯಸ ಪೊದೆಸಸ್ಯ. ಮನೋರಂಜಿನಿ ಪರ್ಯಾಯನಾಮ. ಅರ್ಟಾಬಾಟ್ರಿಸ್ ಓಡರೇಟಿಸಿಮಸ್ ಇದರ ಶಾಸ್ತ್ರೀಯ ಹೆಸರು. ಇದು ಸುಮಾರು 2-4ಮೀ ಎತ್ತರಕ್ಕೆ ಬೆಳೆಯುತ್ತದೆ. ಕೆಲವು ಸಲ ಇತರ ಗಿಡಗಳ ಮೇಲೂ ಹಬ್ಬಿಕೊಂಡು ಬೆಳೆಯುವುಂಟು. ಪ್ರತಿ ಹೂಗೊಂಚಲಿನಲ್ಲಿ ಇರುವ ಕೊಕ್ಕೆಯ ಸಹಾಯದಿಂದ ಬೇರೆ ಗಿಡಗಳನ್ನು  ಹಬ್ಬುತ್ತದೆ.  ಹೂಗಳು ಬಲು ಸುವಾಸನೆಯುಳ್ಳವು.  ಇದೇ ಇದರ ಹೆಸರಿಗೆ ಕಾರಣ. ಹೂವಿನ ದಳಗಳು ಮಂದ ಹಾಗೂ ಹಸುರುಬಣ್ಣದವು.  ಮದನಮಸ್ತಿಯನ್ನು ಅಲಂಕಾರಕ್ಕಾಗಿ ಬೆಳೆಸುವುದೇ ಹೆಚ್ಚು. ಇದರ ಹಣ್ಣುಗಳನ್ನು ತಿನ್ನುವುದಿದೆ. ಎಲೆಗಳ ಕಷಾಯವನ್ನು ಕಾಲರಾ ನಿವಾರಣೆಗೆ ಉಪಯೋಗಿಸುವುದುಂಟು. ಆರ್ಟಬಾಟ್ರೈನ್, ಸ್ವಾವಿಯೋಲೈನ್ ಮತ್ತು ಆರ್ಬಬಾಟ್ರಿನೈನ್ ಎಂಬವು ಇದರಲ್ಲಿಯ ಮುಖ್ಯ ರಾಸಾಯನಿಕಗಳು.
(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ